ಆಪದ್ಧರ್ಮ
ಧರ್ಮವೆಂಬುದು ಸೂತ್ರವಾದರೆ ಆಪದ್ಧರ್ಮ ಅದರ ಒಂದು ಅಪವಾದ. ಧರ್ಮವನ್ನು ಯಾರೂ ಯಾವಾಗಲೂ ಮೀರಿ ನಡೆಯಬಾರದು. ಆದರೆ ಆಪತ್ತು ಆಡಸಿದಾಗ ಧರ್ಮದ ನೇರ ಗೆರೆಯಿಂದ ಸ್ವಲ್ಪ ಅತ್ತಇತ್ತ ನಡೆದರೂ ಬಾಧಕವಿಲ್ಲವೆಂದು ಧರ್ಮಸೂಕ್ಷ್ಮ ಹೇಳುತ್ತದೆ. ಇಲ್ಲಿ ಆಪತ್ತು ಎಂದರೆ ಎಂಥದು, ಮೀರುವುದು ಎಂದರೆ ಎಷ್ಟರ ಮಟ್ಟಿಗೆ ಎಂಬುದನ್ನು ವಿವೇಕದಿಂದ ನಿರ್ಧರಿಸಬೇಕು. ಏಕೆಂದರೆ ಸಾಮಾನ್ಯರಿಗೆ ಧರ್ಮಾಚರಣೆಯ ಪ್ರತಿ ಹಂತದಲ್ಲೂ ಆಪತ್ತು ಒದಗಿದಂತೆ ಭಾಸವಾಗುತ್ತದೆ. ಅಂಥವರಿಗೆ ಅಂಥ ಎಲ್ಲ ಕಾಲಗಳಲ್ಲೂ ಧರ್ಮಬಾಹಿರವಾದದ್ದನ್ನು ಮಾಡಲು, ವಿನಾಯತಿ ಕೊಡಲು ಶಾಸ್ತ್ರಕಾರರು ಆಪದ್ಧರ್ಮ ಸೂತ್ರವನ್ನು ಹೇಳಿಲ್ಲ. ಆಪತ್ತು ಅತ್ಯಧಿಕ ಪ್ರಮಾಣದ್ದಾಗಿದ್ದು ಅದರಿಂದ ಪಾರಾಗಲು ಅಲ್ಪಸ್ವಲ್ಪ ಧರ್ಮದೂರವಾದ ಕಾರ್ಯಾಚರಣೆಯಲ್ಲಿ ಮನುಷ್ಯ ನಿರತನಾದಲ್ಲಿ ಅದನ್ನು ಆಪದ್ಧರ್ಮಾನುಸಾರಿಯಾದ ನಡೆವಳಿಕೆ ಎಂದು ಹೇಳಬಹುದು. ಅಂದರೆ ಆಪದ್ಧರ್ಮ ಎಂದಿಗೂ ಅನುಕೂಲ ಸಿಂಧುವಲ್ಲ.

	ಜೀವಕ್ಕೋ ಜೀವನೋಪಾಯಕ್ಕೋ ಸಂಚಕಾರ ಬರುವಂಥ ಪ್ರಸಂಗವೇ ಆಪತ್ತು, ಅದು ಬಂದಾಗ ಗತ್ಯಂತರವಿಲ್ಲದೆ, ಅನಿವಾರ್ಯವಾಗಿ, ಮಾಡುವ ಆಚರಣೆ, ವ್ಯವಹಾರ ಅಥವಾ ಕೆಲಸ. ಅದು ಎಷ್ಟೇ ನಿಂದನೀಯವೂ, ದೂಷಿತವೂ, ವರ್ಜಿತವೂ ಆಗಿದ್ದರೂ ಆಪದ್ಧರ್ಮವೆನಿಸಿಕೊಳ್ಳುತ್ತದೆ (ಆಪದಿ ಕರ್ತವ್ಯೋ ಧರ್ಮ).

	ಆಪತ್ತು ಹೇಗೆ ಬರುತ್ತದೆ, ಯಾವಾಗ ಬರುತ್ತದೆ, ಏಕೆ ಬರುತ್ತದೆ, ಯಾರಿಗೆ ಬೇಕಾದರೂ ಬರುತ್ತದೆಯೇ-ಎಂಬ ಪ್ರಶ್ನೆಗಳಿಗೆ ನಿತ್ಯಜೀವನದಲ್ಲೇ ಸದುತ್ತರ ಸಿಗುತ್ತದೆ. ವೇದಗಳು, ಇತಿಹಾಸ, ಪುರಾಣಗಳು ಮತ್ತು ಚರಿತ್ರೆಯಲ್ಲಂತೂ ಜ್ವಲಂತ ಉದಾಹರಣೆಗಳಿವೆ.

	ಹರಿಶ್ಚಂದ್ರನಿಗೆ ಬರಬಾರದ ಕಷ್ಟ ಬಂತು. ಆತ ಕ್ಷತ್ರಿಯ ಧರ್ಮವನ್ನು ತ್ಯಜಿಸಿ ಚಂಡಾಲನಾಗಬೇಕಾಯಿತು. ಧರ್ಮಪತ್ನಿಯನ್ನು ದಾಸಿಯನ್ನಾಗಿ ಮಾಡಬೇಕಾಯಿತು. ಆದರೂ ಆತ ಪರಮಧರ್ಮವಾದ ಸತ್ಯವನ್ನು ಬಿಡಲಿಲ್ಲ. ಇಲ್ಲಿ ದೊಡ್ಡ ಧರ್ಮವನ್ನು ಪಾಲಿಸುವುದಕ್ಕಾಗಿ ಸಣ್ಣ ಧರ್ಮಗಳನ್ನು ತ್ಯಜಿಸಿರುವುದು ಕಾಣುತ್ತದೆ. ನ್ಯಾಯವಾಗಿ ಇದು ಧರ್ಮಾಚರಣೆಗೆ ಉದಾಹರಣೆಯೇ ಹೊರತು ಆಪದ್ಧರ್ಮಕ್ಕಲ್ಲ. ಸಾಮಾನ್ಯರಿಗೆ ಜೀವ, ಜೀವನೋಪಾಯಗಳೇ ದೊಡ್ಡವು. ಅವನ್ನುಳಿಸಲು ಅವರು ಆಪದ್ಧರ್ಮವನ್ನು ಮೊರೆ ಹೋಗಬೇಕಾಗುತ್ತದೆ. ಅಜೀಗರ್ತನೆಂಬೊಬ್ಬ ಬಡಬ್ರಾಹ್ಮಣ ಹೊಟ್ಟೆಪಾಡಿಗಾಗಿ ಮಗ ಶುನಃಶೇಪನನ್ನು ಮಾರಿದ್ದೂ ಅಲ್ಲದೆ ಆತನನ್ನು ಕೊಲ್ಲಲೂ ಹಿಂದೆಗೆಯಲಿಲ್ಲ. ವಾಮದೇವನೆಂಬ ಋಷಿಯೊಬ್ಬ ಹಸಿವೆಯನ್ನು ಇಂಗಿಸಿಕೊಳ್ಳಲು ನಾಯಿಯ ಮಾಂಸ ತಿನ್ನಬೇಕಾಯಿತು. ಸುಪ್ರಸಿದ್ಧನಾದ ವಿಶ್ವಾಮಿತ್ರನಂತೂ ಚಂಡಾಲನ ಕೈಯಿಂದ ನಾಯಿಯ ಮಾಂಸವನ್ನು ಪಡೆದು ಭಕ್ಷಿಸಿದ. ಪಾಂಡವರು ಮಾಡಿದ ಭಿಕ್ಷಾಚರ್ಯೆ, ಅಜ್ಞಾತವಾಸಕಾಲದ ಅವರ ವೃತ್ತಿಗಳು ಆಪದ್ಧರ್ಮಕ್ಕೆ ಕೆಲವು ಉದಾಹರಣೆಗಳು. ಪತ್ನಿಯನ್ನು ಕಳೆದುಕೊಂಡು ಪರಿತಪಿಸುತ್ತಿದ್ದ ಶ್ರೀರಾಮ ಸಮಾನ ದುಃಖನಾದ ಸುಗ್ರೀವನ ಸಖ್ಯ ಬೆಳೆಸಿ, ವಾಲಿವಧೆ ಮಾಡಿದ್ದು ನ್ಯಾಯವೇ ಅನ್ಯಾಯವೇ ಎಂಬುದನ್ನು ಆಮೇಲಿನವರು ಚರ್ಚಿಸುವಂತಾಯಿತು. 

	ಹೀಗೆ ಆಪತ್ಕಾಲ (ಮಹಾಭಾರತದಂತೆ ಜಘನ್ಯಕಾಲ) ಬಂದಾಗ ಧರ್ಮಶಾಸ್ತ್ರದ ಕಟ್ಟುಕಟ್ಟಳೆಗಳನ್ನು ಮೀರಿ ತನ್ನ ಉಳಿವಿಗಾಗಿ ಮನುಷ್ಯ ನಡೆದುದುಂಟು. ಆತ್ಮಾರ್ಥೇ ಪೃಧಿವೀಂ ತ್ಯಜೇತ್ ಎಂಬ ವ್ಯಾಸವಾಕ್ಯವನ್ನು ಆಪದ್ಧರ್ಮದ ಪ್ರತಿಪಾದನೆಗಾಗಿ ಬಳಸಬಾರದು. ಅಲ್ಲಿ ಅದರ ಅರ್ಥ-ಆತ್ಮೋದ್ಧಾರಕ್ಕಾಗಿ ಉಳಿದುದೆಲ್ಲವನ್ನೂ ಬಿಡು ಎಂದು. ಆದರೆ ಅದೇ ವ್ಯಾಸರು ಶಾಂತಿಪರ್ವದಲ್ಲಿ ನತ್ವೇವಾತ್ಮಾ ಪ್ರದಾತವ್ಯಃ ಶಕ್ಯೇ ಸತಿ ಕಥಂ ಚನ ಎಂದು ಹೇಳಿ ಏನು ಬರಲಿ ವ್ಯಕ್ತಿ ತನ್ನನ್ನು ತಾನು ಬಿಟ್ಟುಕೊಡಬಾರದೆಂದು ಆಪದ್ಧರ್ಮ ಸೂತ್ರವನ್ನು ಸೂಚಿಸಿದ್ದಾರೆ. ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮ ಯುಧಿಷ್ಠರನಿಗೆ ಆಪದ್ಧರ್ಮದ ವಿಚಾರವಾಗಿ ಅನೇಕ ನಿದರ್ಶನಗಳ ಸಮೇತ ಒಂದು ಸುದೀರ್ಘ ಪ್ರವಚನವನ್ನೇ ಕೊಟ್ಟಿದ್ದಾನೆ.	 

(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ